ಪ್ರಾಯೋಗಿಕ ವೈದ್ಯಶಾಸ್ತ್ರ

ವೈದ್ಯಕೀಯ ಸಮಸ್ಯೆಗಳನ್ನು ಪ್ರಾಣಿಗಳ ಮೇಲಾಗಲೀ ಮಾನವರ ಮೇಲಾಗಲೀ ವೈಜ್ಞಾನಿಕ ಪ್ರಯೋಗಗಳಿಗೆ ಅಳವಡಿಸಿ ವಿಷಯಗಳನ್ನು ತಿಳಿಯುವ ಶಾಸ್ತ್ರ. ಇದು ಸಾಮಾನ್ಯವಾಗಿ ಸಂಶೋಧನಾತ್ಮಕ ಸಂಶೋಧನೆಯಲ್ಲಿ ಅನೇಕ ವಿಧಗಳಿವೆ: ಮಾನವ ಅನುಭವಿಸುತ್ತಿರುವ ರೋಗಗಳಿಗೆ ಹೊಸ ಔಷಧಿಗಳ ಆವಿಷ್ಕಾರ, ರೋಗಗಳನ್ನು ಪತ್ತೆಹಚ್ಚುವ ವಿಧಾನಗಳಲ್ಲಿ ನೂತನ ಪ್ರಯೋಗಗಳು, ರೋಗಗಳನ್ನು ಪತ್ತೆಹಚ್ಚಲು ಇಲ್ಲವೇ ಗುಣಪಡಿಸಲು ಸ್ವದೇಶಿವಸ್ತುಗಳಿಂದ ತಯಾರಿಸಿದ ಉಪಕರಣಗಳ ಉಪಯೋಗ, ಇತ್ಯಾದಿ. ಅನೇಕ ಔಷಧ ತಯಾರಿಕಾ ಘಟಕಗಳಲ್ಲಿ ಪ್ರಾಯೋಗಿಕ ವೈದ್ಯಶಾಸ್ತ್ರ ಇಲಾಖೆಯಲ್ಲಿ ನಡೆಯುವ ಮುಖ್ಯ ಕೆಲಸವೆಂದರೆ ರೋಗಗಳಿಗೆ ಹೊಸ ಔಷಧಿಗಳ ಆವಿಷ್ಕಾರ. ಇದಕ್ಕೆ ಪೂರ್ವಭಾವಿಯಾಗಿ ತಜ್ಞವೈದ್ಯರು ರೋಗವನ್ನು ಶೋಧಿಸಬೇಕು. ಅನಂತರ ರೋಗಿಯ ಒಪ್ಪಿಗೆ ಪಡೆದು ಹೊಸ ಔಷಧಿಯನ್ನು ಕೊಡಬೇಕು. ಇದರಿಂದ ಆತನ ಮೇಲಾಗುವ ಪರಿಣಾಮ ಮತ್ತು ಔಷಧಿಯ ಮೇಲೆ ಆತನಿಂದಾಗುವ ಪರಿಣಾಮ ಎರಡನ್ನೂ ಅತಿ ಎಚ್ಚರಿಕೆಯಿಂದ ಗಮನಿಸಬೇಕು.

	ಹೊಸ ಔಷಧಿ ಸಂಶ್ಲೇಷಿತ ರಾಸಾಯನಿಕವೋ ಗಿಡಮೂಲಿಕೆಗಳ ಶುದ್ಧೀಕರಣದಿಂದ ಪಡೆದ ಔಷಧಿಯೋ ಆಗಿರಬಹುದು.

	ರಾಸಾಯನಿಕವನ್ನು ಸಂಶ್ಲೇಷಿಸಲು ಅತ್ಯಂತ ಆಧುನಿಕ ರಾಸಾಯನಿಕ ಶಾಲೆಯೊಂದು ಬೇಕು. ಅತಿ ಸಂಕೀರ್ಣ ರಾಸಾಯನಿಕ ಔಷಧದ ಯಾವುದೋ ಅಣುವಿನಲ್ಲಿ ಒಂದು ಪರಮಾಣುವನ್ನಾಗಲೀ ರಚನೆಯನ್ನಾಗಲೀ ಬದಲಾಯಿಸಿದರೆ ಹೊಸ ವಸ್ತು ಸೃಷ್ಟಿಯಾಗುತ್ತದೆ. ಈ ರೀತಿ ಸಾವಿರಾರು ರಾಸಾಯನಿಕಗಳನ್ನು ಉತ್ಪಾದಿಸಿ ಅವನ್ನು ಪ್ರಾಣಿಗಳ ಮೇಲೆ ಪ್ರಯೋಗಮಾಡಿದಾಗ ಯೋಗ್ಯ ಔಷಧಿ ದೊರೆಯಬಹುದು, ದೊರೆಯದೆಯೂ ಇರಬಹುದು. ಅದಕ್ಕೆ ತಾಗುವ ವೆಚ್ಚ ಅತಿ. ಆದರೆ ಪ್ರಾಯೋಗಿಕ ವೈದ್ಯಶಾಸ್ತ್ರದಲ್ಲಿ ಇದು ಅನಿವಾರ್ಯ. 

	ಸಸ್ಯವರ್ಗಗಳು ಔಷಧಿಗಳ ಮತ್ತೊಂದು ಮೂಲ. ಅವುಗಳಲ್ಲಿರುವ ಸತ್ತ್ವಾಂಶಗಳನ್ನು ಆಧುನಿಕ ವೈಜ್ಞಾನಿಕ ಪ್ರಯೋಗಗಳ ತಪಾಸಣೆಗೆ ಒಳಪಡಿಸಿ ಸಿದ್ಧೌಷಧಗಳನ್ನು ತಯಾರಿಸಲು ಪ್ರಾಯೋಗಿಕ ವೈದ್ಯಶಾಸ್ತ್ರದ ನೆರವು ಅಗತ್ಯ. ಉದಾಹರಣೆಗೆ ರೆಸರ್ಪಿನ್ ಮಾತ್ರೆ. ರಾವುಲ್ಫಿಯ ಸರ್ಪಂಟೈನಾ ಎಂಬ ಸಸ್ಯದಿಂದ ಇದನ್ನು ತಯಾರಿಸಿದೆ. ರಕ್ತದ ಒತ್ತಡಕ್ಕೆ ಉಪಯೋಗ. ಹೃದ್ರೋಗಕ್ಕೆ ಬಳಸುವ ಡಿಗಾಕ್ಸಿನ್ ಮಾತ್ರೆ ಇನ್ನೂ ಒಂದು ಉದಾಹರಣೆ. ಡಿಜಿಟ್ಯಾಲಿಸ್ ಲ್ಯಾನೇಟ ಎಂಬ ಸಸ್ಯದಿಂದ ಇದನ್ನು ತಯಾರಿಸಿದೆ.

	ಸಸ್ಯಗಳಿಂದ ತಯಾರಿಸಿದ ಔಷಧಗಳಿಗೆ ಆಧುನಿಕತೆಯ ಮುದ್ರೆ ಬೀಳಬೇಕಾದರೆ ಕೆಲವು ಹಂತಗಳುಂಟು.

	1 ಸಸ್ಯವನ್ನು ವೈಜ್ಞಾನಿಕವಾಗಿ ಗುರುತಿಸಿ ಅದರ ಗುಣಲಕ್ಷಣಗಳನ್ನು ಅಭ್ಯಸಿಸಬೇಕು. ಪ್ರಯೋಗದ ಪ್ರತಿಯೊಂದು ಹಂತದಲ್ಲಿಯೂ ಸಸ್ಯವನ್ನು ಸರಿಯಾಗಿ ಗುರುತಿಸುವುದು ಅತಿಮುಖ್ಯ.

	2 ಸಸ್ಯಗಳಲ್ಲಿರುವ ವಿವಿಧ ರಾಸಾಯನಿಕಗಳನ್ನು ಬೇರ್ಪಡಿಸಿ ಅವುಗಳ ಗುಣಲಕ್ಷಣಗಳನ್ನು ಶೋಧಿಸಬೇಕು. ಈ ರಾಸಾಯನಿಕಗಳಿಂದ ಔಷಧಪ್ರಾಯವಾದವನ್ನು ಗುರುತಿಸಿ ಬೇರ್ಪಡಿಸಬೇಕು.

	3 ಹೀಗೆ ಬೇರ್ಪಡಿಸಿದ ಸತ್ತ್ವಾಂಶಗಳನ್ನು ಪ್ರಾಣಿಗಳ ಮೇಲಿನ ಪ್ರಯೋಗಕ್ಕೆ ಅಳವಡಿಸಬೇಕು. ಇದರಲ್ಲಿ ಮೂರು ಹಂತಗಳುಂಟು. ಔಷಧವಸ್ತು ಪ್ರಾಣಿಗಳಲ್ಲಿ ಯಾವ ಪ್ರಮಾಣದಲ್ಲಿ ವಿಷಕಾರಿಯಾಗುತ್ತದೆ ಎಂಬುದನ್ನು ಕಂಡುಹಿಡಿದು ಅದು ದೇಹದ ವಿವಿಧ ಅಂಗಗಳಲ್ಲಿ ಯಾವುದರ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಅದನ್ನು ಆಧುನಿಕ ವೈದ್ಯ ಪದ್ಧತಿಯಲ್ಲಿ ಯಾವರೀತಿ ರೋಗದ ಗುಣಕಾರಿಯಾಗಿ ಉಪಯೋಗಿಸಬಹುದು ಎಂಬುದನ್ನು ಪ್ರಯೋಗಗಳ ಮೂಲಕ ತಿಳಿಯಬೇಕು. ಅನಂತರ ಪ್ರಾಣಿಗಳಲ್ಲಿ ಮಾನವನಿಗೆ ಬರುವಂಥ ರೋಗಗಳನ್ನು ಕೃತಕವಾಗಿ ಬರಿಸಿ ಈ ಹೊಸ ಔಷಧಿಗಳನ್ನು ಕೊಟ್ಟು ಇವು ಯಾವ ರೀತಿಯ ರೋಗಗಳನ್ನು ಗುಣಪಡಿಸುತ್ತವೆಂಬುದನ್ನು ಶೋಧಿಸಬೇಕು. ಈ ತೆರನಾದ ಪ್ರಯೋಗಗಳಿಗಾಗಿ ಉಪಯೋಗಿಸುವ ಪ್ರಾಣಿಗಳೆಂದರೆ ಬಿಳಿಇಲಿ, ಬಿಳಿಹೆಗ್ಗಣ, ಗಿನಿಹಂದಿ, ಮೊಲ, ನಾಯಿ, ಕೋತಿ ಇತ್ಯಾದಿ.

	4 ಮೇಲೆ ಹೇಳಿದ ಮೂರು ಪ್ರಧಾನ ಹಂತ ಏರಿ ಬಂದ ಔಷಧಿಯನ್ನು ಕೊನೆಯದಾಗಿ ಮಾನವನ ಮೇಲೆ ಪ್ರಯೋಗಾತ್ಮಕವಾಗಿ ಬಳಸಲಾಗುತ್ತದೆ. ಏಕೆಂದರೆ ಪ್ರಾಣಿಗಳ ಮೇಲೆ ಎಷ್ಟೇ ಪ್ರಯೋಗ ನಡೆದಿರಲಿ, ಮಾನವನಿಗೆ ಮಾನವನೇ ಅತ್ಯುತ್ತಮ ಮಾದರಿ. ಈ ಪ್ರಯೋಗದಲ್ಲಿ ನಾಲ್ಕು ಹಂತಗಳಿವೆ.

	(i) ಮೊದಲನೆಯ ಹಂತದಲ್ಲಿ ಔಷಧೀಯ ಪ್ರಮಾಣ, ಅದು ಮಾನವನ ದೇಹದ ಮೇಲೆ ಉಂಟುಮಾಡುವ ಪರಿಣಾಮ. ಔಷಧಿಯ ಕ್ರಿಯಾಕಾಲ, ಮಾನವ ದೇಹದ ಸಹಿಷ್ಣುತೆ ಇವನ್ನು ಶೋಧಿಸಬೇಕು. ಅದಕ್ಕಾಗಿ ಕೆಲವು ಆರೋಗ್ಯವಂತ ವ್ಯಕ್ತಿಗಳಿಗೂ ಕೆಲವು ರೋಗಿಗಳಿಗೂ ಔಷಧಿ ಕೊಡಬೇಕು. ಹೀಗೆ ಮಾಡುವ ಮುನ್ನ ಅವರ ಲಿಖಿತ ಒಪ್ಪಿಗೆ ಪಡೆಯಬೇಕು. ಓದು ಬರಹಬಾರದ ವ್ಯಕ್ತಿಯಾದಲ್ಲಿ ಬರಹ ತಿಳಿದವರ ನೆರವಿನಿಂದ ಅವರಿಗೆ ಪ್ರಯೋಗದ ವಿಷಯವನ್ನೆಲ್ಲ ಕೂಲಂಕಷವಾಗಿ ತಿಳಿಸಿ, ಅವರ ಸಾಕ್ಷಿಯ ಮೇಲೆ ಒಪ್ಪಿಗೆ ಪಡೆಯಲಾಗುತ್ತದೆ. ಒಂದು ವೇಳೆ ರೋಗಿ ಪ್ರೌಢನಲ್ಲದಿದ್ದಲ್ಲಿ ಅವನ ಪೋಷಕರ ಒಪ್ಪಿಗೆ ಪಡೆಯಲೇಬೇಕು.

	ಔಷಧಿಯನ್ನು ಕೊಟ್ಟಬಳಿಕ ಕೂಲಂಕಷವಾಗಿ ರೋಗಿಯ ದೈಹಿಕ ಪರೀಕ್ಷೆ ಆವಶ್ಯಕದ ಜೀವರಾಸಾಯನಿಕ ಪರೀಕ್ಷೆ ಮುಂತಾದವನ್ನು ಮಾಡಿಸಬೇಕು. ಹೊಸ ಔಷಧಿಯಿಂದ ಒಂದು ವೇಳೆ ಏನಾದರೂ ದುಷ್ಪರಿಣಾಮ ಉಂಟಾದಲ್ಲಿ ಕೂಡಲೇ ಔಷಧಿಯನ್ನು ನಿಲ್ಲಿಸಿ ತಕ್ಕ ಚಿಕಿತ್ಸೆ ಕೊಡಬೇಕು.

	(ii) ಎರಡನೆಯ ಹಂತದ ಪ್ರಯೋಗದಲ್ಲಿ, ಮೊದಲ ಹಂತದ ಪ್ರಯೋಗದ ಪರಿಣಾಮಗಳನ್ನು ಆಧರಿಸಿ ನಿರ್ಧರಿಸಿದ ಔಷಧಿಯ ಪ್ರಮಾಣ, ದೇಹದ ಮೇಲೆ ಉಂಟಾಗುವ ಪರಿಣಾಮ ಇವುಗಳಿಂದ ಕೆಲವು ರೋಗಿಗಳನ್ನು ತೆಗೆದುಕೊಂಡು ವಿಶದವಾಗಿ ಪರೀಕ್ಷಿಸಿ ಔಷಧಿಯನ್ನು ಕೊಟ್ಟು ಈ ಔಷಧಿ ನಿಜವಾಗಿಯೂ ಈ ರೋಗದಲ್ಲಿ ಗುಣಕಾರಿಯಾಗಬಹುದೇ ಎಂಬುದನ್ನು ನಿರ್ಧರಿಸಬೇಕು.

	(iii) ಮೂರನೆಯ ಹಂತದ ಪ್ರಯೋಗದಲ್ಲಿ, ಎರಡನೆಯ ಹಂತದಲ್ಲಿ ಹೇಳಿರುವಂತೆ, ರೋಗಿಗಳನ್ನು ಪರೀಕ್ಷಿಸಿ ಅವರಿಗೆ ಔಷಧಿ ಕೊಡಬೇಕು. ಮತ್ತೊಂದು ವರ್ಗದ ಇದೇ ಕಾಯಿಲೆಯ ರೋಗಿಗಳಿಗೆ ಈಗಾಗಲೇ ಮಾರುಕಟ್ಟಿಯಲ್ಲಿರುವ ಅಲೋಪತಿ ಔಷಧಿಗಳನ್ನು ಕೊಟ್ಟು ಔಷಧಿಗಳನ್ನೂ ತುಲನಾತ್ಮಕವಾಗಿ ವಿಶ್ಲೇಷಣೆ ಮಾಡಬೇಕು.

(iv) ಈ ತೆರನಾದ ಪ್ರಯೋಗಗಳಿಂದ ಹೊಸ ಔಷದಿ ಗುಣಕಾರಿಯಾಗಿ ಕಂಡುಬಂದಲ್ಲಿ ಔಷಧ ನಿಯಂತ್ರಣ ಇಲಾಖೆಯಿಂದ ಅನುಮತಿ ಪಡೆದು ಅದನ್ನು ಮಾರುಕಟ್ಟೆಗೆ ಬಿಡಬೇಕು. ಮುಂದೆಯೂ ಪ್ರಯೋಗಗಳನ್ನು ಮುಂದುವರಿಸಿ ಔಷಧಗಳ ಗುಣವನ್ನು ಪದೇ ಪದೇ ವಿಶ್ಲೇಷಣೆಗೆ ಒಳಪಡಿಸಬೇಕು.

ಈ ರೀತಿ ಒಂದು ಔಷಧಿ ಅದರ ಮೂಲರೂಪದಿಂದ ಉಪಯೋಗಕರ ರೂಪಕ್ಕೆ ಬರಬೇಕಾದರೆ ಪ್ರಾಯೋಗಿಕ ವೈದ್ಯಶಾಸ್ತ್ರ ಅತ್ಯವಶ್ಯ. ಔಷಧಿಯ ಮೂಲ ಆಯುರ್ವೇದ ಸಿದ್ಧ, ಯುನಾನಿ, ಹೋಮಿಯೊಪತಿ, ಆನುವಂಶಿಕ ವೈದ್ಯಪದ್ಧತಿ, ಪ್ರಕೃತಿಚಿಕಿತ್ಸೆ, ಯೋಗ ಅಥವಾ ಇತರ ಯಾವುದಾದರೂ ದೇಶೀಯ ಪದ್ಧತಿ ಆಗಿರಲಿ ಅದನ್ನು ವೈದ್ಯಶಾಸ್ತ್ರಕ್ಕೆ ಅಳವಡಿಸಬೇಕಾದರೆ ಪ್ರಾಯೋಗಿಕ ವೈದ್ಯಶಾಸ್ತ್ರದ ಶಿಸ್ತು ಅತ್ಯಗತ್ಯ. ಹೀಗೆ ಆಧುನಿಕ ವೈದ್ಯಶಾಸ್ತ್ರದ ಆಧಾರವೇ ಪ್ರಾಯೋಗಿಕ ವೈದ್ಯಶಾಸ್ತ್ರ.

	ರೋಗಗಳ ಮೂಲವನ್ನು ಶೋಧಿಸಲು ಸಾಧ್ಯವಾಗುವಂಥ ನೂತನ ಪ್ರಯೋಗಗಳ ರೂಪಣೆ ಕೂಡ ಪ್ರಾಯೋಗಿಕ ವೈದ್ಯಶಾಸ್ತ್ರದ ಕಾರ್ಯಕ್ಷೇತ್ರಕ್ಕೆ ಸೇರಿದೆ. ಉದಾಹರಣೆಗೆ ಏಡಿಗಂತಿ, ಅಸ್ತಮಾ, ಹೃದಯಾಘಾತ ಮುಂತಾದ ರೋಗಗಳಿಗೆ ನಿರ್ದಿಷ್ಟ ಕಾರಣಗಳನ್ನು ಪತ್ತೆಹಚ್ಚಲು ಇಂದಿಗೂ ಸಾಧ್ಯವಾಗಿಲ್ಲ. ಆದ್ದರಿಂದ ಪ್ರಾಯೋಗಿಕ ವೈದ್ಯಶಾಸ್ತ್ರ ಈ ದಿಶೆಯಲ್ಲಿ ಪ್ರಯೋಗಗಳನ್ನು ಮಾಡುತ್ತದೆ.

ಆಧುನಿಕ ವೈದ್ಯಶಾಸ್ತ್ರ ಪದ್ಧತಿಯಲ್ಲಿ ಅನೇಕಾನೇಕ ಜೈವಿಕವೈದ್ಯ ಉಪಕರಣಗಳನ್ನು ರೋಗಗಳ ತಪಾಸಣೆಗೆ ಅಥವಾ ರೋಗಗಳನ್ನು ಗುಣಪಡಿಸುವುದಕ್ಕೆ ಉಪಯೋಗಿಸುತ್ತಾರೆ. ಇಂಥ ಉಪಕರಣಗಳನ್ನು ತಯಾರಿಸಲು ಅಗತ್ಯವಿರುವ ಅನೇಕ ಉಪಕರಣಗಳನ್ನು ವಿದೇಶಿಗಳಿಂದ ತರಿಸಲಾಗುತ್ತದೆ. ಹೀಗೆ ತರಿಸಲು ಹಣ ಖರ್ಚುಮಾಡಬೇಕಾಗಿರುವುದರಿಂದ ಹಳ್ಳಿಗಳಲ್ಲಿರುವ ಸಾಮಾನ್ಯ ಜನತೆಗೆ ಇವುಗಳ ಸೌಲಭ್ಯ ದೊರೆಯದೇ ಇರುವ ಸಂಭವವೇ ಹೆಚ್ಚು. ಆದ್ದರಿಂದ ಇಂಥ ಉಪಕರಣಗಳ ತಯಾರಿಕೆಯ ತಾಂತ್ರಿಕ ಜ್ಞಾನವನ್ನು ತಿಳಿದುಕೊಂಡು ಸ್ವದೇಶೀ ವಸ್ತುಗಳಿಂದಲೇ ಇವನ್ನು ತಯಾರಿಸಿದರೆ ಇವುಗಳ ವೆಚ್ಚವೂ ಕಡಿಮೆಯಾಗಿ ಸಾಮಾನ್ಯ ಮಾನವನ ಕೈಗೆ ಇವು ನಿಲುಕದಂತೆ ಆಗುತ್ತದೆ.
(ಎ.ಪಿ.ಎನ್.;ಆರ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ